ಫೈಲೀ - 
	ಈಜಿಪ್ಟಿನಲ್ಲಿ ನೈಲ್ ನದಿಯ ಒಂದು ನಡುಗಡ್ಡೆ. ಹಳೆಯ ಆಸ್ವಾನ್ ಪಟ್ಟಣದ ದಕ್ಷಿಣ-ನೈಋತ್ಯಕ್ಕೆ 11 ಕಿಮಿ. ದೂರದಲ್ಲಿ ಹಳೆಯ ಆಸ್ವಾನ್ ಕಟ್ಟೆಯಿಂದ ಮೇಲೆ ಈ ದ್ವೀಪವಿದೆ. ಫೈಲೀಯಲ್ಲಿ ಅನೇಕ ಪ್ರಾಚೀನ ವಾಸ್ತು ನಿರ್ಮಾಣಗಳಿವೆ. ಇಲ್ಲಿಯ ಕಟ್ಟಡಗಳು 1ನೆಯ ನೆಕ್ಟಾನಿಬೋನ (ಆಳ್ವಿಕೆ ಕ್ರಿಪೂ ಸು 361-340) ಕಾಲದಿಂದ ಟ್ರೇಜನ್ ಚಕ್ರವರ್ತಿಯ ಕಾಲದ ವರೆಗಿನ (52-117) ಅವಧಿಯಲ್ಲಿ ನಿರ್ಮಿತವಾಗಿದ್ದವು.

	ಫೈಲೀಯಲ್ಲಿರುವ ಐಸಿಸ್ ದೇವತೆಯ ಬೃಹತ್ ಮಂದಿರ ಬಹು ಕಾಲ ಪ್ರಖ್ಯಾತವಾಗಿತ್ತು. ಚಕ್ರವರ್ತಿ ಜಸ್ಟಿನಿಯನ್‍ನ ಕಾಲದವರೆಗೂ (6ನೆಯ ಶತಮಾನ) ಇಲ್ಲಿ ಐಸಿಸ್ ಆರಾಧನೆ ಮುಂದುವರೆದಿತ್ತು. ಫೈಲೀಯಲ್ಲಿರುವ ಕೆಲವು ಪೌರಾಣಿಕ ದೃಶ್ಯಾವಳಿಗಳೂ ಗಮನ ಸೆಳೆಯುವಂಥವಾಗಿವೆ. ಇವಕ್ಕೆ ಸಂಬಂಧಿಸಿದ ಶಾಸನಗಳು ಧಾರ್ಮಿಕ ಮಹತ್ವವುಳ್ಳವು.

	1907ರಲ್ಲಿ ಫೈಲೀ ದ್ವೀಪ ಹಳೆಯ ಆಸ್ವಾನ್ ಕಟ್ಟೆಯ ಜಲಾಶಯದಲ್ಲಿ ಮುಳುಗಿ ಹೋಗಿತ್ತು. 1970ರಲ್ಲಿ ನೈಲ್ ನದಿಗೆ ಅಡ್ಡಲಾಗಿ ಇನ್ನೂ ಮೇಲಕ್ಕೆ ಎತ್ತರದ ಆಸ್ವಾನ್ ಕಟ್ಟೆ ನಿರ್ಮಿಸಿದಾಗ ಈ ದ್ವೀಪವನ್ನು ಮುಳುಗಿಸಿದ್ದ ನೀರಿನ ಮಟ್ಟ ಇಳಿಯಿತು. ಫೈಲೀ ದ್ವೀಪ ಮತ್ತೆ ಮೇಲೆದ್ದಿತು. ಹಳೆಯ ಜಲಾಶಯದಿಂದಾಗಿ ಇಲ್ಲಿಯ ಕಟ್ಟಡಗಳಿಗೆ ಸಾಕಷ್ಟು ಅಪಾಯ ತಟ್ಟಿದ್ದುದು ಕಂಡುಬಂತು.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ